ದಂತದ ಕೆತ್ತನೆ -
ಕೆತ್ತನೆಯ ಕೆಲಸದಲ್ಲೆಲ್ಲ ಬಹು ನಾಜೂಕಿನದು. ಈ ಕಸಬು ಮಾಡುವ ಶಿಲ್ಪಿಗಳು ಮೊಟ್ಟಮೊದಲು ಕಟ್ಟಿಗೆ ಹಾಗೂ ಗಂಧದ ಮರ ಕೆತ್ತನೆಯ ಕೆಲಸ ಮಾಡಿ ಪ್ರಾವೀಣ್ಯ ಹೊಂದಿದ ಅನಂತರವೇ ಈ ಕೆತ್ತನೆಗೆ ಕೈ ಹಾಕುತ್ತಾರೆ. ಮೊಗಲರ ಕಾಲದಲ್ಲಿ ಹಸ್ತಿದಂತದಲ್ಲಿ ಕೊರೆದ ಅನೇಕ ಉಬ್ಬು ಭಾವಚಿತ್ರಗಳು, ಜಪಾನ್ ಹಾಗೂ ಭಾರತದ ಅನೇಕಾನೇಕ ಹಸ್ತಿದಂತದ ಒಳ್ಳೆಯ ಕಲಾಕೃತಿಗಳು ಹೈದರಾಬಾದ್‍ನ ಸಾಲಾರಜಂಗ್ ವಸ್ತು ಸಂಗ್ರಹಾಲಯ, ಹಾಗೂ ಮೈಸೂರು ಜಗನ್ಮೋಹನ ವಸ್ತುಸಂಗ್ರಹಾಲಯಗಳಲ್ಲಿ ಇಂದಿಗೂ ಕಾಣದೊರೆಯುತ್ತಿದ್ದು ಕಲಾವಿದನ ಸೌಂದರ್ಯ ಪ್ರಜ್ಞೆ, ಪರಿಷ್ಕøತ e್ಞÁನ ಸೂಕ್ಷ್ಮ ಕಲಾ ಕೌಶಲ್ಯ ಹಾಗೂ ಕಲಾ ಪ್ರತಿಭೆಗಳಿಗೆ ಹೆಸರಾಗಿವೆ.

ದಂತ ಕೆತ್ತನೆಯ ಕರ್ಮಶಾಲಿಗಳು ವಿವಿಧ ರೀತಿಯ ಉಕ್ಕಿನ ಚಾಣ, ಚಾಣ ಹೊಡೆಯಲು ಕಟ್ಟಿಗೆಯ ಪಟ್ಟಿಯಂತಿರುವ ಕೊಡತಿ, ಮರಳುಕಾಗದ, ಉಳಿ, ಅರ, ಬೈರಿಗೆ ಯಂತ್ರ; ಪಾಲಿಶ್ ಮಾಡಲು ಬತ್ತದ ದಂಟು, ಮೀನು ಚರ್ಮ, ದಂತದ ಪುಡಿ, ಗರಗಸ, ಇತ್ಯಾದಿಗಳನ್ನು ಉಪಯೋಗಿಸುತ್ತಾರೆ. ಹಸ್ತಿದಂತದ ಮೇಲೆ ಸ್ವಾಭಾವಿಕವಾಗಿ ಇರುವ ತೆಳುವಾದ ಪೊರೆಯನ್ನು ಆಮ್ಲ ರಾಸಾಯನಿಕ ಕ್ರಿಯೆಯಿಂದ ಇಲ್ಲವೇ ಕಾಯಿಸಿ, ಅಥವಾ ತೀವ್ರತಂಪು ಮಾಡಿ ತೆಗೆದುಹಾಕಿದ ಅನಂತರವೇ ಕೆತ್ತನೆಯ ಕೆಲಸಕ್ಕೆ ಅನುಕೂಲವಾಗುವುದು. ದಂತಗಳನ್ನು ಪ್ರಮಾಣಕ್ಕೆ ತಕ್ಕಂತೆ ಗರಗಸದಿಂದ ಕತ್ತರಿಸಿ ಅದರ ಮೇಲೆ ನಿರ್ದಿಷ್ಟ ಆಕೃತಿಯನ್ನು ಸೀಸದಕಡ್ಡಿಯಿಂದ ಬರೆದುಕೊಂಡು ಕೆತ್ತಲು ಪ್ರಾರಂಭಿಸುತ್ತಾರೆ. 10" ಎತ್ತರವಿರುವ ವಿಗ್ರಹವೊಂದರೆ ಬೆಲೆ ಅದರ ಕಲಾಕೌಶಲ್ಯಕ್ಕೆ ಅನುಸಾರವಾಗಿ ಒಂದು ನೂರು ರೂಪಾಯಿಗಳಿಂದ ಸಾವಿರ ರೂಪಾಯಿಗಳ ವರೆಗೆ ಇರುವುದು. 

ದಂತದಿಂದ ಉಡುಪಿನ ಗುಂಡಿಗಳು, ಕೂದಲ ಸೂಜಿ, ಸೀರೆಸೂಜಿ, ಕುಂಕುಮ ಕರಡಗಿ, ಚದುರಂಗದ ಕಾಯಿಗಳು, ಉಂಗುರ, ಬಳೆ, ನಕ್ಷೆಪೆಟ್ಟಿಗೆ, ಪೌಡರ್ ಕರಂಡಕಗಳು, ದೇವರ ಮೂರ್ತಿಗಳು, ವ್ಯಕ್ತಿ ಉಬ್ಬುಚಿತ್ರ, ಪ್ರಾಣಿ, ಪಕ್ಷಿ, ಸಿಂಹಾಸನ, ಊರುಗೋಲು, ಹಿಡಿಕೆ, ಮಣಿಗಳು, ಕಂಠಹಾರಗಳು, ಅಂಗಿಯ ತೋಳಿನ ಗುಂಡಿಗಳು, ದಂತದ ಖಚಿತ ಚಹಮೇಜು, ಆಸನಗಳು, ದೀಪದ ಅಡ್ಣಣಿಗೆ, ತೂಗುದೀಪ, ಫೋಟೋಫ್ರೇಮು, ನಶ್ಯದಡಬ್ಬಿ, ಬಿಲಿಯರ್ಡ್ ಚೆಂಡು, ಸಿಗರೇಟ್ ಪೆಟ್ಟಿಗೆ, ಟ್ರೇ, ಸಂದರ್ಶಕಚೀಟಿ (ವಿಜಿûಟಿಂಗ್ ಕಾರ್ಡ್) ಕೊಡೆಯ ಹಿಡಿಕೆ, ಬೀಸಣಿಗೆ, ಹಾರ್ಮೋನಿಯಂ ಸಾಮಗ್ರಿಗಳು, ಆಟದ ವಸ್ತುಗಳು, ತಂತುವಾದ್ಯಗಳಲ್ಲಿ ಹಸ್ತಿದಂತದ ಇನ್‍ಲೇ (ಖಚಿತ)ಕೆಲಸ, ಅಲಂಕಾರಿಕ ಮತ್ತು ಗೃಹಕೃತ್ಯದ ವಸ್ತುಗಳು, ಲೆಕ್ಕಣಿಕೆ, ಮತ್ತು ಕಾಗದ ಕತ್ತರಿಸುವ ಚಾಕು ಇತ್ಯಾದಿಗಳನ್ನು ಅಂದವಾಗಿ ತಯಾರಿಸುತ್ತಾರೆ.

ಪ್ರಾಚೀನ ಶಿಲಾಯುಗದ ಅಂತ್ಯಭಾಗದಲ್ಲಿ ಆದಿವಾಸಿಗಳು ಗಜದಂತಗಳಿಂದ ನಿರ್ಮಿಸಿದ ಆಯುಧಗಳನ್ನು ಬಳಸುತ್ತಿದ್ದರು. ಇಂದಿಗೆ 5000 ವರ್ಷಗಳ ಹಿಂದೆಯೇ ಸಿಂಧು ಕಣಿವೆಯಲ್ಲಿದ್ದ ಕಲಾವಿದರು ನಿರ್ಮಿಸಿದ ಕಿವಿಯ ಆಭರಣಗಳು, ಪದಕಗಳು, ಬಳೆಗಳು - ಹೀಗೆ ಹಲವಾರು ಬಗೆಯ ಒಡವೆಗಳು ಆ ಕಾಲದ ಉಚ್ಚ ಸಂಸ್ಕøತಿಯ ಕುರುಹುಗಳಾಗಿ ಉಳಿದುಬಂದಿವೆ. ಕ್ರಿ. ಪೂ. ಎರಡು ಸಾವಿರ ವರ್ಷಾವಧಿಯಲ್ಲಿ ಅಬಿಸೀನಿಯ ಮತ್ತು ಸೋಮಾಲಿ ವರ್ತಕರು ಈಜಿಪ್ಟಿಗೆ ಒದಗಿಸುತ್ತಿದ್ದ ವಸ್ತುಗಳಲ್ಲಿ, ಭಾರತದ ಅಮೂಲ್ಯವಾದ ಗಜದಂತದ ಬಗೆಗೆ ಈಜಿಪ್ಟಿನ ಶಾಸನಗಳಲ್ಲಿ ಉಲ್ಲೇಖವಿದೆ. ಅರೇಬಿಯದ ಆಗ್ನೇಯ ಮತ್ತು ದಕ್ಷಿಣ ಕರಾವಳಿಯ ವರ್ತಕರೊಡನೆ ಭಾರತೀಯ ವರ್ತಕರು ವ್ಯಾಪಾರ ಸಂಪರ್ಕವಿಟ್ಟುಕೊಂಡಿದ್ದರು. ಮತ್ತು ಅರೇಬಿಯದ ವರ್ತಕರು ಸಿರಿಯ ಹಾಗೂ ಈಜಿಪ್ಟಿಗೆ ಭಾರತೀಯ ಸರಕುಗಳನ್ನು ಕೊಂಡೊಯ್ಯುತ್ತಿದ್ದರು. ಕ್ರಿ. ಪೂ. ಹತ್ತನೆಯ ಶತಮಾನದ ಸಾಲಮನ್ ದೊರೆ ಭಾರತೀಯ ಅಮೂಲ್ಯ ದಂತವಸ್ತುಗಳನ್ನು ಸಂಗ್ರಹಿಸಿದ ಉಲ್ಲೇಖವಿದೆ. ಮಹಾಶಯ ಅಲೆಕ್ಸಾಂಡರ್‍ನ ಪರಿವಾರದಲ್ಲಿದ್ದ ನಿಯಾರ್ಕಸ್ ಸಿಂಧೂನದಿ ತೀರದ ಮಹಿಳೆಯರು ಹಸ್ತಿದಂತದ ಕರ್ಣಾಭರಣಗಳನ್ನೂ ಧರಿಸುತ್ತಿದ್ದರು ಎಂದು ಹೇಳಿದ್ದಾನೆ. ಗುಪ್ತರ ಕಾಲದಲ್ಲಿ ಹಸ್ತಿದಂತದ ಹೆತ್ತನೆಗೆ ವಿಶಿಷ್ಟ ಪ್ರೋತ್ಸಾಹ ಸಿಕ್ಕಿತು. ಅವರ ಕಾಲದ ವಿವಿಧ ರೀತಿಯ ಹಣಿಗೆ, ಪ್ರಾಣಿ, ಪಕ್ಷಿ, ಮಂಟಪ, ನಶ್ಯದ ಡಬ್ಬಿ, ಆಸನಗಳು, ದೇವತೆ ಇತ್ಯಾದಿಗಳ ಸುಂದರವಾದ ವಿಗ್ರಹಗಳು ಈ ಕಲೆಗೆ ವಿಶಿಷ್ಟ ಸ್ಥಾನವನ್ನು ದೊರಕಿಸಿ ಕೊಟ್ಟಿವೆ. ಅಕ್ಬರನ ಕಾಲದ ದಂತದ ಸಿಂಹಾಸನಗಳೂ ಪೀಠೋಪಕರಣ, ಹಣಿಗೆ, ತೂಗುದೀಪ, ಆಯುಧಗಳ ಹಿಡಿಕೆಗಳು, ಉಬ್ಬು ವ್ಯಕ್ತಿ ಚಿತ್ರಗಳೂ (ಚಿನ್ನದ ಜೊತೆಗೆ ಕುಂದಣಗೊಂಡವು) ವಿಶ್ವವಿಖ್ಯಾತಿಯನ್ನು ಪಡೆದಿವೆ. ತದನಂತರ ಷಹಜಹಾನ ಕಾಲದಲ್ಲೂ ಕುಶಲಕಲೆ ಹಾಗೂ ದಂತ ಕೆತ್ತನೆ ಕೆಲಸಗಳಿಗೆ ಪ್ರೋತ್ಸಾಹ ದೊರೆಕಿತು. ಹೈದರಾಬಾದಿನಲ್ಲಿ ಹಸ್ತಿದಂತ ಕೆತ್ತನೆಯ ಕಲೆ ಹೆಚ್ಚು ಬೆಳವಣಿಗೆಯನ್ನು ಹೊಂದಿತು.

ಏಷ್ಯಖಂಡಕ್ಕಿಂತ ಆಫ್ರಿಕ ಖಂಡದಿಂದಲೇ ಹೆಚ್ಚು ಪ್ರಮಾಣದಲ್ಲಿ ದಂತಗಳು ಭಾರತಕ್ಕೆ ಆಮದು ಆಗುತ್ತಿದ್ದುವು. ಕಾರಣವೇನೆಂದರೆ ಆಫ್ರಿಕ ಆನೆಗಳ ದಂತಗಳು ಹೆಚ್ಚು ದಪ್ಪ ಹೆಚ್ಚು ಉದ್ದ ಹೆಚ್ಚು ಗಡುಸಾದ ದಂತಗಳಾಗಿದ್ದವು.

ಭಾರತದ ದಂತ ಕಲಾಕೃತಿಯಾದ `ಹಸ್ತಿದಂತ ಜಾದುಗೋಳ ಹಸ್ತಿದಂತದ ಕಲಾಕೃತಿಯಲ್ಲಿ ಒಂದು ಅಪೂರ್ವ ಮಾದರಿಯಾಗಿದೆ. ಈ ಗೋಳದಲ್ಲಿ ಇಪ್ಪತ್ತೊಂದು ಗೋಲಗಳು ಒಂದರಲ್ಲಿ ಒಂದು ಇರುವಂತೆ ಕೊರೆಯಲ್ಪಟ್ಟಿವೆ.

ಹಸ್ತಿದಂತ : ಆಫ್ರಿಕ, ಭಾರತ, ಬರ್ಮ, ಮಲಯ, ಶ್ರೀಲಂಕಾ, ಸುಮಾತ್ರ, ದಕ್ಷಿಣ ವಿಯೆಟ್‍ನಾಂ, ದಕ್ಷಿಣಏಷ್ಯ ಮೊದಲಾದವು ಆನೆಗಳ ತವರೂರುಗಳು. ಗಂಡಾನೆಗೆ ವಾಡಿಕೆಯಂತೆ ದಪ್ಪವಾದ ಮತ್ತು ಉದ್ದವಾದ ಎರಡು ಬಿಳಿ ಕೋರೆಗಳಿರುವವು. ಹೆಣ್ಣಾನೆಯ ಕೋರೆ ತೀರ ಸಣ್ಣ. ಒಂದು ಕೋರೆಯ ತೂಕ 26 ಪೌಂಡುಗಳಿಂದ 235 ಪೌಂಡುಗಳ ವರೆಗೆ ಇರುವುದು. ಕೋರೆಯ ಬುಡದ ಸುತ್ತಳತೆ ಸುಮಾರು 12 ಇಂಚುಗಳಿಂದ 25 ಇಂಚುಗಳ ವರೆಗೆ ಇದ್ದದ್ದು ಕಂಡುಬಂದಿದೆ. ಶ್ರೀಲಂಕೆಯಲ್ಲಿ ಲಭ್ಯವಿರುವ ಆನೆಗಳಲ್ಲಿ ಪ್ರತಿಶತ 2-3 ಆನೆಗಳಿಗೆ ಮಾತ್ರ ದಂತಗಳಿರುತ್ತವೆ. 9 ಅಡಿ 10 1/2 ಅಂಗುಲದ ಉದ್ದವಾದ ಕೋರೆ ಹಲ್ಲುಗಳು ವಸ್ತು ಸಂಗ್ರಹಾಲಯಗಳಲ್ಲಿವೆ. 8 ಅಡಿ 9 ಅಂಗುಲ ಉದ್ದವಾದ ಕೋರೆಗಳು ಇಂಗ್ಲೆಂಡಿನ ಅರಮನೆಯಲ್ಲಿವೆ. ಪ್ರತಿ ಕೋರೆಯ ತೂಕ 160 ಪೌಂಡುಗಳು. ಐದನೆಯ ಜಾರ್ಜ್‍ನಿಗೆ ಉಡುಗೊರೆಯಾಗಿ ನೀಡಿದ ಆಫ್ರಿಕದ ಒಂದು ದಂತ 165 ಪೌಂಡು ತೂಗಿ 9 ಅಡಿ ಉದ್ದವಿದ್ದಿತು. 1898 ರಲ್ಲಿ eóÁ್ಯಂಜಿûಬಾರಿನ ಮಾರುಕಟ್ಟೆಯಲ್ಲಿ ಇದ್ದ ದಂತದ ಒಂದು ಜೋಡಿ 450 ಪೌಂಡು ತೂಗಿತು. ಇವುಗಳಲ್ಲಿ ಒಂದನ್ನು ಕೆನ್ಸಿಂಗಟನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಇಡಲಾಗಿದೆ.

ಆಫ್ರಿಕದ ನೀರ್ಗುದುರೆ, ಕಡಲ್ಗುದುರೆ ಹಾಗೂ ಅರಣ್ಯಗಳಲ್ಲಿರುವ ಕೆಲವು ಪ್ರಾಣಿಗಳ ದಂತಗಳು ವ್ಯವಹಾರಿಕವಾಗಿ ದಂತಗಳೆಂದೇ ಪರಿಗಣಿಸಲ್ಪಡುತ್ತವೆ. 

ಇವು ಶ್ರೇಷ್ಠ ಕುಶಲ ಕೆಲಸಕ್ಕೆ ಒದಗುತ್ತವೆ. ಈ ದಂತಗಳನ್ನು ಮಾನವನ ಕೃತ್ರಿಮ ಹಲ್ಲುಗಳಾಗಿ ಉಪಯೋಗಿಸುತ್ತಿದ್ದುಂಟು.
ಭಾರತೀಯ ತಂತುವಾದ್ಯಗಳಾದ ಸಾರಂಗಿ, ತಂಬೂರಿ, ಸಿತಾರ, ಹಾಗೂ ವೀಣೆಗಳಲ್ಲಿ ಹಸ್ತಿದಂತದ ಅತ್ಯಂತ ನಾಜೂಕಾದ ಅಲಂಕಾರದ ಕುಂದಣ ಕೆತ್ತನೆ ಕೆಲಸ ಕಂಡುಬರುವುದು. ಮೈಸೂರು, ತಿರುವನಂತಪುರ, ಆಂಧ್ರಗಳಲ್ಲಿ ಈ ಬಗೆಯ ಕುಸುರಿನ ಕೆಲಸ ನಡೆಯುತ್ತಾ ಬಂದಿದೆ. ಭಾರತದ ದೇವತಾ ವಿಗ್ರಹಗಳ ಕೆತ್ತನೆಯಲ್ಲಿ ಸೂಕ್ಷ್ಮತೆ, ಜಾಣ್ಮೆ, ಶಿಲಾಘಾಟ ತತ್ತ್ವ, ಮೋಹಕ ವಿನ್ಯಾಸ ನಯ ಮತ್ತು ನಾಜೂಕುಗಳಿವೆ.

ಕರ್ನಾಟಕದ ಮೈಸೂರು ಭಾಗದಲ್ಲಿ ಪ್ರಖ್ಯಾತ ಕುಂದಣ ಕೆಲಸದ ವಸ್ತುಗಳು ಹೆಚ್ಚು ಜನಾದರಣೀಯವಾಗಿದೆ. ಭಾರತದಲ್ಲಿ ಯಾವ ಭಾಗದಲ್ಲಿಯೂ ಕಾಣಸಿಗದಷ್ಟು ಕುಶಲಕಲೆ ಕೆಲಸಗಾರರು ಇಲ್ಲಿ ಇದ್ದಾರೆ. ಈ ಕೈಗಾರಿಕೆಗಳಲ್ಲಿ ಹೆಚ್ಚಾಗಿ ತೊಡಗಿದವರು ಮಹಮದೀಯರು. ಅವರು ಮಾಡಿದ ಮೇಜು, ಟೀಪಾಯ್, ಮಡಿಸುವ ತೆರೆ, ಫೋಟೊ ಚೌಕಟ್ಟುಗಳು, ಪೆಟ್ಟಿಗೆಗಳು ಹಾಗೂ ಫಲಕಗಳು ವಿಶ್ವಮಾನ್ಯತೆಗೆ ಪಡೆದಿರುತ್ತವೆ. ಜಗತ್ತಿನ ವಿವಿಧ ಭಾಗಗಳಿಗೆ ಆ ವಸ್ತುಗಳು ರಫ್ತಾಗುತ್ತವೆ. ಮೈಸೂರಿನ ಶೇಷ್ಠ ಮೀರ್ ಷೌಕತ್ ಅಲಿ ಅವರ ಕಲಾ ಪ್ರೌಢಿಮೆಯನ್ನು ಮೆಚ್ಚಿ ಅಖಿಲ ಭಾರತ ಕುಶಲ ಕೈಗಾರಿಕಾ ಮಂಡಲಿಯವರು ಪ್ರಶಸ್ತಿ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಪ್ರಶಸ್ತಿಯನ್ನು ಇತ್ತು ಗೌರವಿಸಿತು. ಹಾಗೂ ಭಾರತ ಸರ್ಕಾರ 1966 ರಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಹಾಜಿ ಮಿರ್ಜಾನಯಾಜ್ ವೊಂದ್ ಅಲಿ ಹಾಗೂ ಪರಮಾಚಾರ ಅವರೂ ಈ ಕಲೆಯಲ್ಲಿ ಪ್ರಸಿದ್ಧರು.

ದಂತ ಕೆತ್ತನೆ, ಕಟ್ಟಿಗೆ ಕೆತ್ತನೆ, ಕುಂದಣ ಕಲಾಕೃತಿಗಳ ಉತ್ತಮ ಗುಣ ಮೌಲ್ಯವನ್ನು ಕಾದುಕೊಂಡು ಕಲೆಯ ಅಭಿವೃದ್ಧಿಪಡಿಸಲು ನಿಯಂತ್ರಣ ಕಾಯದೆಯನ್ನು ಕರ್ನಾಟಕ ಸರ್ಕಾರದವರು 1964 ರಲ್ಲಿ ಜಾರಿಗೊಳಿಸಿದರು. ಕುಶಲ ಕೈಗಾರಿಕೆಯ ಸಿದ್ಧವಸ್ತುಗಳಿಗೆ ಯೋಗ್ಯ ಮಾರುಕಟ್ಟೆಯನ್ನು ದೊರೆಕಿಸಲು ಹಾಗೂ ವಿದೇಶಿ ವಿನಿಯಮಯ ಪಡೆಯಲು ಅಖಿಲ ಭಾರತ ಮತ್ತು ರಾಜ್ಯದ ಕರಕುಶಲ ಕೈಗಾರಿಕಾ ಮಂಡಲಿಗಳು ಪ್ರಯತ್ನ ಮಾಡುತ್ತಲಿವೆ. ದಂತ ಮತ್ತು ಗಂಧ ಕೆತ್ತನೆ ಕೆಲಸಗಾರರಿಗೆ ಅಗತ್ಯವಾದ ದಂತ ಹಾಗೂ ಗಂಧದ ಮರವನ್ನು ಸಹಕಾರೀ ಸಂಘಗಳ ಮುಖಾಂತರ ಒದಗಿಸಲಾಗುತ್ತದೆ. ಜಪಾನ್‍ನಲ್ಲಿ ಜರುಗಿದ ಎಕ್ಸ್‍ಪೊ- 70 ರ ವಸ್ತುಪ್ರದರ್ಶನಗಳಿಗೆ ರವಾನಿಸಲಾದ ಕರ್ನಾಟಕ ರಾಜ್ಯದ ಕರಕುಶಲ ದಂತಕೆತ್ತನೆ ಹಾಗೂ ಕುಂದಣ ಒಡವೆ ವಸ್ತುಗಳು ಬಹುಜನ ವಿದೇಶಿಯರನ್ನು ಆಕರ್ಷಿಸಿದವು. ಕರಕುಶಲ ಕಲಾವಸ್ತುಗಳ ಮಾರಾಟದ ಮಳಿಗೆಗಳು (ಎಂಪೋರಿಯಮ್) ಪ್ರತಿರಾಜ್ಯದಲ್ಲಿ ಇವೆ. ಪ್ರತಿರಾಜ್ಯದಲ್ಲಿಯೂ ಕುಶಲಕಲಾ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಕರ್ನಾಟಕ ರಾಜ್ಯದ ಮೈಸೂರು ಶ್ರೀ ಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆ, ಬೆಂಗಳೂರಿನ ಕೇಂದ್ರ ಸರ್ಕಾರದ ಡಿಸೈನ್ ಸೆಂಟರಿನಲ್ಲಿ ವಿದ್ಯಾರ್ಥಿವೇತನ ಕೊಟ್ಟು ಕಲಿಸುವ ಏರ್ಪಾಡು ಮಾಡಲಾಗಿದೆ.

ಹೆಚ್. ವೆಂಕಟಪ್ಪನವರು ಹೊನ್ನಾವರ; ಎಸ್. ನಂಜುಂಡಸ್ವಾಮಿ, ಮೈಸೂರು ; ಹಿರಣ್ಯಪ್ಪ, ಮಾಡುಗೋಡ, ಸೊರಬ ; ವೆಂಕಟಗಿರಿ ಚಿತ್ರಕ್,ಸಿದ್ದಾಪುರ ; ರಘುವೀರಶೆಟ್ಟಿ, ಕುಮಟ ; ಸುಬ್ರಾಯ್ ಆರ್. ಶೆಟ್ಟಿ ಗುಡಿಗಾರ, ಕುಮಟ ; ಮಾಧವ ಗಣಪತಿ ಶೆಟ್ಟಿ ಗುಡಿಗಾರ, ಕುಮಟ ; ಗಣಪತಿ ಮಂಜುನಾಥ ಶೆಟ್ಟಿ ಗುಡಿಗಾರ, ಹೊನ್ನಾವರ ; ಮಂಜುನಾಥ ಪಾಂಡಪ್ಪ ಗುಡಿಗಾರ, ಸಾಗರ; ವಿಠ್ಠಲ್ ರಾಮಚಂದ್ರ ಶೆಟ್ಟಿ, ಕುಮಟ ; ವಿಠ್ಠಲ್ ಮಂಜುನಾಥ ಶೆಟ್ಟಿ, ಹೊನ್ನಾವರ ; ಇವರೆಲ್ಲರೂ ಕರ್ನಾಟಕ ರಾಜ್ಯದ ಶ್ರೇಷ್ಠ ದಂತ ಕೆತ್ತನೆಯ ಕಲಾವಿದರು.

ಮೈಸೂರು, ಸೊರಬ, ಸಾಗರ, ಶಿವಮೊಗ್ಗ, ಹೊನ್ನಾವರ, ಕುಮಟ - ಈ ಭಾಗಗಳಲ್ಲಿ ದಂತ ಕೆತ್ತನೆಯ ಕುಶಲ ಕೆಲಸಗಾರರು ಇಂದಿಗೂ ತಮ್ಮ ಕಸುಬಿನಲ್ಲಿ ಮುಂದುವರಿಯುತ್ತಿದ್ದಾರೆ.

ಭಾರತದಲ್ಲಿ ಕರ್ನಾಟಕ, ಕೇರಳ, ಆಂಧ್ರ, ರಾಜಸ್ಥಾನ್, ದೆಹಲಿ, ಗುಜರಾತ್, ನೇಪಾಳ, ಪಂಜಾಬ್ ಮತ್ತು ಒರಿಸ್ಸ ರಾಜ್ಯಗಳು ಆಕರ್ಷಕ ದಂತ ಕೆತ್ತನೆಯ ಕಲೆಯ ಉತ್ಪಾದನಾ ಕೇಂದ್ರಗಳಾಗಿವೆ. ಕೆಲವು ಕಡೆ ಹಸ್ತಿದಂತ ಕೆತ್ತನೆಯ ನವ್ಯ ಕಲೆ ಬೆಳಕಿಗೆ ಬಂದಿದೆ.

ಈಜಿಪ್ಟಿನ ಜನ ಪ್ರಾಚೀನ ಕಾಲದಿಂದಲೂ ಭವ್ಯ ಕಲೆಯ ಸೃಷ್ಟಿಗೆ ಹಸ್ತಿದಂತವನ್ನು ವಿವಿಧ ರೀತಿಯಲ್ಲಿ ಉಪಯೋಗಿಸುತ್ತ ಬಂದರು. ಪ್ರತಿಮೆಯನ್ನು ಕೊರೆದು ತಯಾರಿಸುವ ಕಲೆ, ಕ್ರಿ, ಪೂ. 3000 ವರ್ಷಗಳ ಹಿಂದೆಯೇ ಈಜಿಪ್ಟಿನಲ್ಲಿತ್ತು. ಕೆಂಪು, ಹಸಿರು, ಕಪ್ಪು, ಕಂದು ಬಣ್ಣಗಳನ್ನು ಹಚ್ವಿ ಹಸ್ತಿದಂತದ ಗೊಂಬೆಗಳನ್ನು ಅವರು ತಯಾರಿಸುತ್ತಿದ್ದರು. ಚಿತ್ರಗಳನ್ನು ಸುಲಭವಾಗಿ ಸುಂದರವಾಗಿ ಶಾಶ್ವತವಾಗಿ ಮಾಡುವ ಕೈಗಾರಿಕೆಗಳಲ್ಲಿ ಇದು ಒಂದಾಗಿತ್ತು. ಗ್ರೀಕ್ ಕಲಾವಿದರು ಚಿನ್ನದೊಡನೆ ಹಸ್ತಿದಂತಗಳನ್ನು ಅವುಗಳ ಚಿತ್ರಗಳನ್ನು ಸೇರಿಸಿ ವಿವಿಧ ದೇವತೆಗಳ ವಿಗ್ರಹಗಳನ್ನು ನಿರ್ಮಿಸಿ ತಮ್ಮ ಪ್ರೌಢಿಮೆಯನ್ನು ಬೆಳಗಿಸಿದರಲ್ಲದೇ ವಿಗ್ರಹಗಳ ಮುಖ, ಕೈ, ಕಾಲು, ಪಾದಗಳನ್ನು ದಂತಗಳಿಂದ ತಯಾರಿಸುತ್ತಿದ್ದರು. ಹೀಗೆ ಚಿನ್ನ ಮತ್ತು ದಂತಗಳ ಮಿಲನದ ಮೋಹಕ ವಿನ್ಯಾಸ ಕಲೆ ಅಲ್ಲಿ ಬೆಳೆದು ಬಂತು. ಈಜಿಪ್ಟಿನಲ್ಲಿ ತಯಾರಾದ ಅರಸನ ಮೂರ್ತಿಯೊಂದನ್ನು ಬ್ರಿಟಿಷ್ ಮ್ಯೂಜಿಯಂನಲ್ಲಿ ಇಡಲಾಗಿದೆ.

ಇಂಡೋನೇಷ್ಯ, ಜಾವಾ, ಬಲಿ ದೇಶಗಳಲ್ಲಿ ಮಧ್ಯಯುಗಲ್ಲಿಯೇ - ಈ ಕಲೆ ಪ್ರಚಲಿತವಿತ್ತು. ವೃತ್ತಾಕಾರದ ಕಠಾರಿಯ ಹಿಡಿಕೆಗಳ ಮೇಲೆ ಅತ್ಯಂತ ಸೂಕ್ಷ್ಮ ಹಾಗೂ ಮೋಹಕ ರೀತಿಯಲ್ಲಿ ನಕ್ಷೆಗಳ ತಯಾರಿಕೆಯಲ್ಲಿ ವಿವಿಧ ಬಗೆಯ ನಕ್ಷೆಗಳಿಂದ ಕೂಡಿದ ತುತ್ತೂರಿಗಳನ್ನು ಕೊರೆಯುವುದರಲ್ಲಿ ಇಲ್ಲಿನ ಜನ ಪ್ರವೀಣರಾಗಿದ್ದರು. ಹಸ್ತಿದಂತದ ಅನೇಕ ರೀತಿಯ ನಯನಾಜೂಕಿನ ಆಭರಣಗಳು ಇವರ ಸೃಷ್ಟಿಯಾಗಿವೆ.

ಚೀನದಲ್ಲಿ ದಂತ ಕೆತ್ತನೆ ಕಲೆ 3000 ವರ್ಷಗಳ ಹಿಂದೆಯೇ ರೂಢಿಯಲ್ಲಿತ್ತು. 19 ನೆಯ ಶತಮಾನದಲ್ಲಿ ಚೀನ ಬಹಳಷ್ಟು ದಂತಗಳನ್ನು ವಿದೇಶಗಳಿಗೆ ನಿರ್ಯಾತ ಮಾಡುತ್ತಿತ್ತು. ಹಸ್ತಿದಂತದ ಇಡೀ ಒಂದು ಕೋರೆಯ ಮೇಲೆ ಮನಮೋಹಕವಾದ ವಿನ್ಯಾಸದಿಂದ ಕಥಾರೂಪವಾಗಿ ಚಿತ್ರಗಳನ್ನು ಕೊರೆವ ಚೀನಿಯರ ದಂತಕಲಾ ವೈಖರಿ ಅತ್ಯುನ್ನತ ಮಟ್ಟದ್ದಾಗಿತ್ತು. ಸೂಕ್ಷ್ಮವಾದ ನಕ್ಷೆಗಳಿಂದ ಕೂಡಿದ ನಾನಾ ಆಕೃತಿಯ ದಂತ ಬೀಸಣಿಕೆ ಕೆತ್ತನೆಯ ಕಲೆ ಅವರದೇ. ಹಲವಾರು ಬಣ್ಣಗಳನ್ನೂ ಅಂದಚಂದವಾಗಿ ಅವರು ಬಳಸುತ್ತಿದ್ದರು. ಅವರು ನಿರ್ಮಿಸಿದ ಪ್ರಾಚೀನ ಕಾಲದ ರಥ, ಮಂಚಗಳು ದಂತ ಕಲಾಕೃತಿಗಳಿಂದ ಶೋಭಾಯಮಾನವಾಗಿವೆ. ರತ್ನಾಭರಣಗಳಿಂದ ಖಚಿತವಾದ ಹಸ್ತಿದಂತದ ಭಗವಾನ್ ಬುದ್ಧನ ಕೆತ್ತನೆಯ ವಿಗ್ರಹಗಳು ಇಡೀ ಕಲಾಲೋಕವನ್ನೇ ಬೆರಗುಗೊಳಿಸುವಂತಿವೆ. ಕ್ಯಾಂಟನ್, ಹಾಂಗ್‍ಕಾಂಗ್ ನಗರಗಳು ದಂತ ಕಲಾಕೃತಿಗಳ ಪ್ರಸಿದ್ಧ ಕೇಂದ್ರಗಳಾಗಿವೆ.

ಜಪಾನಿನಲ್ಲಿ ಹಸ್ತಿದಂತ ಕೆತ್ತನೆಯ ಕಲೆ ಸ್ವಲ್ಪ ತಡವಾಗಿ ಪ್ರಾರಂಭವಾದರೂ ಈ ಕಲೆಯನ್ನು ಅವರು ಅಮೋಘವಾದ ರೀತಿಯಲ್ಲಿ ಆಳವಡಿಸಿಕೊಂಡರು. ಕಿಯೋಟೋ ನಗರ ದಂತ ಕೆತ್ತನೆಯ ಪ್ರಮುಖ ಕಲಾಕೇಂದ್ರವಾಯಿತು. ಇವರು ಮಾಡಿದ ವಿವಿಧ ಭಂಗಿಯ ವಿಗ್ರಹಗಳು, ನಕ್ಷೆ ಪೆಟ್ಟಿಗೆಗಳು, ಹಣಿಗೆಗಳು ಗುಂಡಿ ಮತ್ತು ಆಟದ ಸಾಮಾನು ಜಗತ್ತಿನ ಪ್ರತಿಯೊಂದು ಭಾಗಕ್ಕೂ ರಫ್ತಾಗುತ್ತಿದೆ.
ಆಫ್ರಿಕಾದಲ್ಲಿ ಕೂಡ ಹಸ್ತಿದಂತ ಕಲಾಕೌಶಲ್ಯ ಉಂಟು. ಸಂಗೀತ ಉಪಕರಣಗಳು, ವಿವಿಧ ರೀತಿಯ ಮಣಿಗಳು, ಹಿಡಿಕೆಗಳು, ಬೆನಿಸ್ ಪಂಗಡದ ಮುಖವಾಡಗಳು ಇಲ್ಲಿನ ಅಮೂಲ್ಯ ಕೃತಿಗಳು.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ದಂತಕಲಾಕೌಶಲ್ಯ ಮಧ್ಯಯುಗದಲ್ಲಿಯೇ ಹೆಚ್ಚು ಪ್ರಸಿದ್ಧಿಯನ್ನು ಪಡೆಯಿತು. ಫ್ರಾನ್ಸ್, ಗ್ರೀಸ್, ರೋಮ್, ಜರ್ಮನಿ, ಇಂಗ್ಲೆಂಡ್, ಅಮೆರಿಕ, ಇಟಲಿ ಮುಂತಾದ ದೇಶಗಳು ಹಸ್ತಿದಂತ ಕೆತ್ತನೆ ಹಾಗೂ ಕುಸುರಿನ ಕೆಲಸದ ಪ್ರೌಢಿಮೆಯನ್ನು ಬೆಳಗಿಸಿದವು. ಈಗಲೂ ಅಲ್ಲಿ ಈ ಕಲೆಗೆ ಪ್ರೋತ್ಸಾಹವಿದೆ.
(ಆರ್.ಜಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ